ಶುಕ್ರವಾರ, ಮಾರ್ಚ್ 9, 2012

ಮಕ್ಕಳ ಅನ್ನಕದ್ದವರ ಮನೆಮೇಲೆ ಲೋಕಾಯುಕ್ತ ರೇಡ್




ಬೆಂಗಳೂರು, ಮಾ. 9 : ಬಡಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಬದಲು ಕಳಪೆ ಆಹಾರ ಒದಗಿಸಿ, ಕೋಟಿ ಕೋಟಿ ಲೂಟಿ ಹೊಡೆದು ತಮ್ಮ ಜೋಳಿಗೆ ತುಂಬಿಸಿಕೊಂಡ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಅಂಗನವಾಡಿಯ ಭಾರೀ ಅವ್ಯವಹಾರವನ್ನು ಶುಕ್ರವಾರ ಬಯಲಿಗೆಳೆದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ, ಐಎಎಸ್ ಅಧಿಕಾರಿ ಡಾ. ಶಮ್ಲಾ ಇಕ್ಬಾಲ್, ಉಪ ನಿರ್ದೇಶಕರಾದ ಕೆಎಎಸ್ ಅಧಿಕಾರಿಗಳಾದ ಉಷಾ ಪಟ್ವಾಡಿ ಮತ್ತು ಮುನಿರಾಜು, ಪೌಷ್ಟಿಕ ಆಹಾರ ಪೂರೈಕೆ ಗುತ್ತಿಗೆ ಪಡೆದಿದ್ದ ಕ್ರಿಸ್ಟೋಫರ್ ಎಂಬುವರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದ ಆಹಾರೋತ್ಪನ್ನ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಮಾತ್ರವಲ್ಲ ರಾಜ್ಯಾದ್ಯಂತ ಬೆಂಗಳೂರು, ಮೈಸೂರು, ತುಮಕೂರು, ರಾಯಚೂರು, ಬಿದರ್ ಮುಂತಾದ ಕಡೆಗಳಲ್ಲಿ ಇರುವ ಅಂಗನವಾಡಿ ಆಹಾರ ಉತ್ಪಾದನಾ ಕೇಂದ್ರ ಮತ್ತು ಪೌಷ್ಟಿಕ ಆಹಾರ ಸರಬರಾಜು ಕೇಂದ್ರಗಳ ಮೇಲೆ ಲೋಕಾಯುಕ್ತ ಡಿಐಜಿ ಅರುಣ್ ಚಕ್ರವರ್ತಿ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಅಂಗನವಾಡಿ ನಿಧಿ ದುರ್ಬಳಕೆ ಮತ್ತು ಆಹಾರ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎಂದು ಲೋಕಾಯುಕ್ತ ಇಲಾಖೆಗೆ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಒಂದು ತಂಡ ರಚಿಸಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಬೆಳ್ಳಿ ಮೀನುಗಳನ್ನು ಬಲೆಗೆ ಬೀಳಿಸಿದ್ದಾರೆ. ಈ ಅವ್ಯವಹಾರದ ಒಟ್ಟು ಪ್ರಮಾಣ ಎಷ್ಟು ಎಂದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಲಾಗುತ್ತಿದೆ. ಆದರೆ, ಪೌಷ್ಟಿಕ ಆಹಾರ ಒದಗಿಸುವದರ ಬದಲು ಅತ್ಯಂತ ಕಳಪೆ ಗುಣಮಟ್ಟದ ಆಹಾರಧಾನ್ಯಗಳನ್ನು ಪೂರೈಸಲಾಗುತ್ತಿತ್ತು. ಇಂಥ ಆಹಾರ ತಿಂದ ಅನೇಕ ಮಕ್ಕಳ ಆರೋಗ್ಯ ಹಾಳಾದ ಘಟನೆಗಳು ಅನೇಕ ಕಡೆಗಳಲ್ಲಿ ನಡೆದಿವೆ.




ಮಂಗಳವಾರ, ನವೆಂಬರ್ 22, 2011

ಸೋಮಣ್ಣ ವಿರುದ್ಧ ತನಿಖೆಗೆ ಕೋರ್ಟ್ ಅಸ್ತು



ಕಾನೂನು ಬಾಹಿರವಾಗಿ ಭೂ ಸ್ವಾಧೀನ ಮಾಡಿಕೊಂಡ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸೋಮಣ್ಣ ವಿರುದ್ಧ ಲೋಕಾಯುಕ್ತ ತನಿಖೆಗೆ ಲೋಕಾಯುಕ್ತ ವಿಶೇಷ ಕೋರ್ಟ್ ಮಂಗಳವಾರ ಆದೇಶ ನೀಡಿದೆ. ಸಚಿವ ಸೋಮಣ್ಣ, ಪತ್ನಿ ಶೈಲಜಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸಿಆರ್‌ಪಿಸಿ 156/3ರ ಅಡಿಯಲ್ಲಿ ತನಿಖೆ ನಡೆಸಿ ಡಿಸೆಂಬರ್ 26ರೊಳಗೆ ವರದಿ ನೀಡುವಂತೆ ಕೋರ್ಟ್ ಲೋಕಾಯುಕ್ತ ಎಸ್ಪಿಗೆ ಸೂಚಿಸಿದೆ. ನಾಗದೇವನಹಳ್ಳಿಯ 22 ಗುಂಟೆ ಭೂಮಿಯನ್ನು ಕಾನೂನುಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿ.ಸೋಮಣ್ಣ, ಪತ್ನಿ ಶೈಲಜಾ ಹಾಗೂ ಮತ್ತಿತರರ ವಿರುದ್ಧ ಸಾಫ್ಟ್‌ವೇರ್ ಎಂಜಿನಿಯರ್ ರವಿಕೃಷ್ಣಾ ರೆಡ್ಡಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕಾಗಿ ನಾಗದೇವನಹಳ್ಳಿಯ ವಿವಿಧ ಸರ್ವೆ ನಂಬರುಗಳಲ್ಲಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) 1994ರಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸಿತ್ತು. 1997ರಲ್ಲಿ ಈ ಭೂಮಿಯನ್ನು ತನ್ನ ವಶಕ್ಕೆ ಪಡೆದಿತ್ತು. ಈ ಪೈಕಿ 22 ಗುಂಟೆಯನ್ನು 2004ರಲ್ಲಿ ಸಚಿವ ವಿ.ಸೋಮಣ್ಣ ತನ್ನ ಪತ್ನಿ ಶೈಲಜಾ ಅವರು ಖರೀದಿಸಿದ್ದರು. ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಪತ್ನಿ ಹೆಸರಿಗೆ ಡಿನೋಟಿಫಿಕೇಷನ್ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಬುಧವಾರ, ನವೆಂಬರ್ 16, 2011

ಲೋಕಾಯುಕ್ತ ಮುಚ್ಚಲು ಬಿಡುವುದಿಲ್ಲ, ಭಾರದ್ವಾಜ್









ಬೆಂಗಳೂರು, ನ 16: ಲೋಕಾಯುಕ್ತ ಸಂಸ್ಥೆ ಮುಚ್ಚುವ ಸಂಬಂಧ ನನ್ನ ಮುಂದೆ ಯಾವುದೇ ಪ್ರಸ್ತಾಪವಿಲ್ಲ. ಯಾವುದೇ ಕಾರಣಕ್ಕೂ ಲೋಕಾಯುಕ್ತ ಸಂಸ್ಥೆ ಮುಚ್ಚಲು ನಾನು ಬಿಡುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿಕೆ ನೀಡಿದ್ದಾರೆ. ಸೂಕ್ತ ಅಭ್ಯರ್ಥಿ ಲೋಕಾಯುಕ್ತ ಸ್ಥಾನಕ್ಕೆ ಸಿಗುತ್ತಿಲ್ಲ ಎನ್ನುವುದು ಒಪ್ಪಿಕೊಳ್ಳುವ ಮಾತಲ್ಲ. ಸುಪ್ರೀಂಕೋರ್ಟ್ ವೆಬ್ ಸೈಟ್ ನಲ್ಲಿ ಹುಡುಕಾಟ ನಡೆಸಿದರೆ ಸೂಕ್ತ ಆಯ್ಕೆ ಸಿಗದೇ ಏನು? ಸರಕಾರ ಪೂರ್ಣಪ್ರಮಾಣದಲ್ಲಿ ಈ ಕೆಲಸಕ್ಕೆ ತನ್ನನ್ನು ತೊಡಗಿಸಿಕೊಂಡಿಲ್ಲ ಎನ್ನುವುದೇ ಸತ್ಯ ಎಂದು ರಾಜ್ಯಪಾಲರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತ ಸಂಬಂಧ ಬೆಳವಣಿಗೆಗಳು ಸಾರ್ವಜನಿಕರ ಮನಸಿನಲ್ಲಿ ಬೇಸರ ತಂದಿದೆ. ಗಾಂವ್ಕರ್ ವರ್ಗಾವಣೆ ನನಗೆ ಬೇಸರ ತಂದಿದೆ. ವರ್ಗಾವಣೆಯಿಂದ ಹಿಡಿದು ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿದ್ದೇನೆ. ಲೋಕಾಯುಕ್ತ ಸ್ಥಾನಕ್ಕೆ ರಬ್ಬರ್ ಸ್ಟ್ಯಾಂಪ್ ನಂತ ವ್ಯಕ್ತಿಯನ್ನು ಆರಿಸಿದರೆ ನಾನು ಅದಕ್ಕೆ ಸಮ್ಮತಿಸುವುದಿಲ್ಲ ಎಂದು ಭಾರದ್ವಾಜ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಲೋಕಾಯುಕ್ತ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ನೀಡಿರುವ ಹೇಳಿಕೆಗೆ ಉತ್ತರಿಸುವ ಅಗತ್ಯ ಕಾಣಿಸುವುದಿಲ್ಲ. ಕರ್ನಾಟಕದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯಪಾಲನಾಗಿದ್ದೇನೆ, ಇಲ್ಲಿಯ ರಾಜಕೀಯ ಬೆಳವಣಿಗೆ ನನಗೆ ಬೇಸರ ತಂದಿದೆ ಎಂದು ರಾಜ್ಯಪಾಲರು ಬೇಸರ ವ್ಯಕ್ತ ಪಡಿಸಿದ್ದಾರೆ.












ಕ್ಯಾಬಿನೆಟ್ ಮಂತ್ರಿ ಸ್ಥಾನ ಆಫರ್ ಇತ್ತಾ? ಅಂದ್ರೆ ಹೆಗ್ಡೆ ಗರಂ







ಬೆಂಗಳೂರು, ನ.16: 'ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಹೆಗ್ಡೆ ಅವರಿಗೆ ಗವರ್ನರ್ ಸ್ಥಾನ ಅಥವಾ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ನನ್ನ ನೈತಿಕತೆ ಪ್ರಶ್ನಿಸುವ ಅಧಿಕಾರ ಅವರಿಗಿಲ್ಲ' ಎಂದು ನ್ಯಾ.ಸಂತೋಷ್ ಹೆಗ್ಡೆ ಗುಡುಗಿದರು. ಧರಂ ಸಿಂಗ್ ಅವರು ಕೂಡಾ ಅವರ ಹೆಸರು ವರದಿಯಲ್ಲಿ ಪ್ರಸ್ತಾಪವಾದಾಗ ನನ್ನನ್ನು ಟೀಕಿಸಿದ್ದರು. ಯಾವ ಪಕ್ಷಗಳು ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೆಗ್ಡೆ ಹೇಳಿದರು. ಅಡ್ವಾಣಿ ಜೊತೆ ರಾಜಕೀಯ ಸಂಬಂಧವಿಲ್ಲ. ರಾಜೀನಾಮೆ ಹಿಂಪಡೆಯುವ ಸಂದರ್ಭದಲ್ಲಿ ಅವರು ಯಾವುದೇ ಆಫರ್ ನೀಡಲಿಲ್ಲ. ನನಗೆ ಯಾವ ರಾಜಕೀಯ ಪಕ್ಷಗಳ ಸಹವಾಸವೂ ಇಲ್ಲ. ಜನ ಲೋಕಪಾಲ್ ಮಸೂದೆ ಜಾರಿಗಾಗಿ ಹೋರಾಟ ನಡೆಸಿರುವ ಟೀಂ ಅಣ್ಣಾಗೆ ನನ್ನ ಬೆಂಬಲವಿದೆ. ಆದರೆ, ಅಣ್ಣಾ ಟೀಂ ಕೈಗೊಂಡ ಕೆಲ ನಿರ್ಣಯಗಳ ಬಗ್ಗೆ ಬೇಸರವಿದೆ ಎಂದು ಹೆಗ್ಡೆ ಹೇಳಿದರು. ಮತ್ತೆ ಮಧುಕರ ಶೆಟ್ಟಿ ಕಡೆ ಹೊರಳಿದ ಹೆಗ್ಡೆ, ನಾಲ್ಕು ತಿಂಗಳ ಹಿಂದಿನ ಸಂದರ್ಶನ ಹೀಗೆ ಸಡನ್ ಆಗಿ ಪ್ರಕಟವಾಗಿದ್ದಾದರೂ ಏಕೆ? ಯಡಿಯೂರಪ್ಪ ಅವರ ಬಂಧನದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಮುಚ್ಚಲು ಯಾರಾದರೂ ಹುನ್ನಾರ ನಡೆಸಿದ್ದಾರೆ ಆದರೆ ಅದು ಸಾಧ್ಯವಿಲ್ಲ ಎಂದು ಸಂತೋಷ್ ಹೆಗ್ಡೆ ಪುನರ್ ಪ್ರಶ್ನಾವಳಿಗಳನ್ನು ಹರಡಿದರು. ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಹೊಸದೇನೂ ಹೇಳದಿದ್ದರೂ ಅವರು ಎತ್ತಿರುವ ಹಳೆ ಪ್ರಶ್ನೆಗಳಿಗೆ ಬಿಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಅನುಯಾಯಿಗಳು ನೀಡುವ ಹೊಸ ಉತ್ತರಗಳ ಮೂಲಕ ಈ ಮಾಲಿಕೆ ಮುಂದುವರೆಯಲಿದೆ.













ಮಂಗಳವಾರ, ಸೆಪ್ಟೆಂಬರ್ 20, 2011

ನನ್ನ ಸ್ಟೈಲ್ ಹೇಗಿದೆ ? ರಾಜೀನಾಮೆ ಶಿವರಾಜ್‌ ಪಾಟೀಲ್‌



ಕಾನೂನುಬಾಹಿರವಾಗಿ ಹೌಸಿಂಗ್‌ ಸೊಸೈಟಿಯಿಂದ ನಿವೇಶನ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ. ಶಿವರಾಜ್‌ ಪಾಟೀಲ್‌ ತಮ್ಮ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.

'ತಮ್ಮ ವಿರುದ್ಧ ಕಳೆದ ಕೆಲವು ದಿನಗಳಿಂದ ದ್ವೇಷಪೂರಿತ ಅಪಪ್ರಚಾರ ಮಾಡಲಾಗುತ್ತಿದೆ. ಈ ರೀತಿಯ ಆರೋಪಗಳಿಂದ ಮನನೊಂದು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ, ತಾವು ಮತ್ತು ತಮ್ಮ ಹೆಂಡತಿ ಕಾನೂನುಬಾಹಿರವಾಗಿ ಹೌಸಿಂಗ್‌ ಸೊಸೈಟಿ ನಿವೇಶ ಹೊಂದಿಲ್ಲ' ಎಂದು ತಮ್ಮ ರಾಜೀನಾಮೆ ಮತ್ತು ಕುಟುಂಬದ ವಿರುದ್ಧ ಮಾಡಿರುವ ಆರೋಪಗಳಿಗೆ ಅವರು ಸುಮಾರು 4 ಪುಟಗಳ ಸ್ಪಷ್ಟೀಕರಣ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆವೇಷ ಮತ್ತು ದುಃಖದಿಂದ ಸ್ಪಷ್ಟೀಕರಣವನ್ನು ಓದಿ ನ್ಯಾ. ಶಿವರಾಜ್‌ ಪಾಟೀಲ್‌ ಅವರು ಪತ್ರಕರ್ತರ ಯಾವುದೇ ಪ್ರಶ್ನೆಗಳಿಗೂ ಪ್ರತಿಕ್ರಿಯಿಸಲು ಅಲ್ಲಿ ನಿಲ್ಲದೆ ನೇರವಾಗಿ ಕಚೇರಿಯಿಂದ ಹೊರನಡೆದರು.

ಶನಿವಾರ, ಸೆಪ್ಟೆಂಬರ್ 17, 2011

ನನ್ನ ಸ್ಟೈಲ್ ಹೇಗಿದೆ ಎಂಬುದನ್ನು ಕಾದು ನೋಡಿ


"ಮೊದಲನೇ ಲೋಕಾಯುಕ್ತ ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆ ಇದೆ ಎನ್ನುವುದನ್ನು ತೋರಿಸಿಕೊಟ್ಟರು. ಎರಡನೇ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸಂಸ್ಥೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋಸಿರಿದರು. ಮೂರನೇಯವನಾಗಿ ನಾನು ಹೇಗೆ ಕೆಲಸ ಮಾಡುತ್ತೇನೆ, ನನ್ನ ಸ್ಟೈಲ್ ಹೇಗಿದೆ ಎಂಬುದನ್ನು ಕಾದು ನೋಡಿ." ಲೋಕಾಯುಕ್ತರಿಗೆ ಸರ್ವಾಧಿಕಾರ ಬೇಡ, ಆದರೆ ಸರಿಯಾದ ಅಧಿಕಾರ ಇರಬೇಕು ಮತ್ತು ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಆಗಬೇಕು. ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ