ಕಾನೂನು ಬಾಹಿರವಾಗಿ ಭೂ ಸ್ವಾಧೀನ ಮಾಡಿಕೊಂಡ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸೋಮಣ್ಣ ವಿರುದ್ಧ ಲೋಕಾಯುಕ್ತ ತನಿಖೆಗೆ ಲೋಕಾಯುಕ್ತ ವಿಶೇಷ ಕೋರ್ಟ್ ಮಂಗಳವಾರ ಆದೇಶ ನೀಡಿದೆ. ಸಚಿವ ಸೋಮಣ್ಣ, ಪತ್ನಿ ಶೈಲಜಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸಿಆರ್‌ಪಿಸಿ 156/3ರ ಅಡಿಯಲ್ಲಿ ತನಿಖೆ ನಡೆಸಿ ಡಿಸೆಂಬರ್ 26ರೊಳಗೆ ವರದಿ ನೀಡುವಂತೆ ಕೋರ್ಟ್ ಲೋಕಾಯುಕ್ತ ಎಸ್ಪಿಗೆ ಸೂಚಿಸಿದೆ. ನಾಗದೇವನಹಳ್ಳಿಯ 22 ಗುಂಟೆ ಭೂಮಿಯನ್ನು ಕಾನೂನುಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿ.ಸೋಮಣ್ಣ, ಪತ್ನಿ ಶೈಲಜಾ ಹಾಗೂ ಮತ್ತಿತರರ ವಿರುದ್ಧ ಸಾಫ್ಟ್‌ವೇರ್ ಎಂಜಿನಿಯರ್ ರವಿಕೃಷ್ಣಾ ರೆಡ್ಡಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕಾಗಿ ನಾಗದೇವನಹಳ್ಳಿಯ ವಿವಿಧ ಸರ್ವೆ ನಂಬರುಗಳಲ್ಲಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) 1994ರಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸಿತ್ತು. 1997ರಲ್ಲಿ ಈ ಭೂಮಿಯನ್ನು ತನ್ನ ವಶಕ್ಕೆ ಪಡೆದಿತ್ತು. ಈ ಪೈಕಿ 22 ಗುಂಟೆಯನ್ನು 2004ರಲ್ಲಿ ಸಚಿವ ವಿ.ಸೋಮಣ್ಣ ತನ್ನ ಪತ್ನಿ ಶೈಲಜಾ ಅವರು ಖರೀದಿಸಿದ್ದರು. ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಪತ್ನಿ ಹೆಸರಿಗೆ ಡಿನೋಟಿಫಿಕೇಷನ್ ಮಾಡಿಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ