ಶುಕ್ರವಾರ, ಮಾರ್ಚ್ 9, 2012

ಮಕ್ಕಳ ಅನ್ನಕದ್ದವರ ಮನೆಮೇಲೆ ಲೋಕಾಯುಕ್ತ ರೇಡ್




ಬೆಂಗಳೂರು, ಮಾ. 9 : ಬಡಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಬದಲು ಕಳಪೆ ಆಹಾರ ಒದಗಿಸಿ, ಕೋಟಿ ಕೋಟಿ ಲೂಟಿ ಹೊಡೆದು ತಮ್ಮ ಜೋಳಿಗೆ ತುಂಬಿಸಿಕೊಂಡ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಅಂಗನವಾಡಿಯ ಭಾರೀ ಅವ್ಯವಹಾರವನ್ನು ಶುಕ್ರವಾರ ಬಯಲಿಗೆಳೆದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ, ಐಎಎಸ್ ಅಧಿಕಾರಿ ಡಾ. ಶಮ್ಲಾ ಇಕ್ಬಾಲ್, ಉಪ ನಿರ್ದೇಶಕರಾದ ಕೆಎಎಸ್ ಅಧಿಕಾರಿಗಳಾದ ಉಷಾ ಪಟ್ವಾಡಿ ಮತ್ತು ಮುನಿರಾಜು, ಪೌಷ್ಟಿಕ ಆಹಾರ ಪೂರೈಕೆ ಗುತ್ತಿಗೆ ಪಡೆದಿದ್ದ ಕ್ರಿಸ್ಟೋಫರ್ ಎಂಬುವರ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದ ಆಹಾರೋತ್ಪನ್ನ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಮಾತ್ರವಲ್ಲ ರಾಜ್ಯಾದ್ಯಂತ ಬೆಂಗಳೂರು, ಮೈಸೂರು, ತುಮಕೂರು, ರಾಯಚೂರು, ಬಿದರ್ ಮುಂತಾದ ಕಡೆಗಳಲ್ಲಿ ಇರುವ ಅಂಗನವಾಡಿ ಆಹಾರ ಉತ್ಪಾದನಾ ಕೇಂದ್ರ ಮತ್ತು ಪೌಷ್ಟಿಕ ಆಹಾರ ಸರಬರಾಜು ಕೇಂದ್ರಗಳ ಮೇಲೆ ಲೋಕಾಯುಕ್ತ ಡಿಐಜಿ ಅರುಣ್ ಚಕ್ರವರ್ತಿ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಅಂಗನವಾಡಿ ನಿಧಿ ದುರ್ಬಳಕೆ ಮತ್ತು ಆಹಾರ ವಿತರಣೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎಂದು ಲೋಕಾಯುಕ್ತ ಇಲಾಖೆಗೆ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಒಂದು ತಂಡ ರಚಿಸಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಬೆಳ್ಳಿ ಮೀನುಗಳನ್ನು ಬಲೆಗೆ ಬೀಳಿಸಿದ್ದಾರೆ. ಈ ಅವ್ಯವಹಾರದ ಒಟ್ಟು ಪ್ರಮಾಣ ಎಷ್ಟು ಎಂದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಲಾಗುತ್ತಿದೆ. ಆದರೆ, ಪೌಷ್ಟಿಕ ಆಹಾರ ಒದಗಿಸುವದರ ಬದಲು ಅತ್ಯಂತ ಕಳಪೆ ಗುಣಮಟ್ಟದ ಆಹಾರಧಾನ್ಯಗಳನ್ನು ಪೂರೈಸಲಾಗುತ್ತಿತ್ತು. ಇಂಥ ಆಹಾರ ತಿಂದ ಅನೇಕ ಮಕ್ಕಳ ಆರೋಗ್ಯ ಹಾಳಾದ ಘಟನೆಗಳು ಅನೇಕ ಕಡೆಗಳಲ್ಲಿ ನಡೆದಿವೆ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ